		ನಾಗರಿಕತೆ ಮತ್ತು ಸಂಸ್ಕøತಿ

	ನಾಗರಿಕತೆ, ಸಂಸ್ಕøತಿಗಳು ಎರಡೂ ನಾಣ್ಯದ ಎರಡು ಬದಿಗಳಿದ್ದಂತೆ. ಇವು ಮಾನವ ಜನಾಂಗದ ಎರಡು ಪ್ರಮುಖ ಜೀವನ ಕ್ಷೇತ್ರಗಳೆನಿಸಿವೆ. ಮಾನವನ ಎಲ್ಲ ರಚನಾತ್ಮಕ ಕಾರ್ಯ ಚಟುವಟಿಕೆಗಳೂ ಇವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿರುತ್ತವೆ. ಆದಿ ಮಾನವ ಪ್ರಗತಿಯ ಹಾದಿ ಹಿಡಿದಂದಿನಿಂದಲೂ ಇವು ಬೆಳೆಯುತ್ತ, ಪ್ರಾಮುಖ್ಯ ಪಡೆಯುತ್ತ ಬಂದಿವೆ.

	ನಾಗರಿಕತೆ : ನಾಗರಿಕತೆ ಎಂಬ ಪದಕ್ಕೆ ನಿಖರವಾದ ವ್ಯಾಖ್ಯೆ ನೀಡುವುದು ಕಷ್ಟ. ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಇತಿಹಾಸಜ್ಞರು, ದಾರ್ಶನಿಕರು, ಸಾಹಿತಿಗಳು ನಾಗರಿಕತೆ ಸಂಸ್ಕøತಿಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಬಳಸಿದ್ದಾರೆ. ಇಂಗ್ಲಿಷಿನ ಸಿವಿಲಿ¸óÉೀಷನ್ ಎಂಬ ಪದ ಲ್ಯಾಟಿನ್ ಭಾಷೆಯ ಸಿವಿಟಾಸ್ ಎಂಬ ಪದದಿಂದ ಬಂದದ್ದು. ಸಿವಿಟಾಸ್ ಎಂದರೆ ನಗರ ಎಂಬ ಅರ್ಥ ಉಂಟು. ನಾಗರಿಕತೆ ಎಂಬ ಪದ ನಗರ ಜೀವನವನ್ನು ಕುರಿತು ಹೇಳುತ್ತದೆ. ಅಂದರೆ ಮಾನವ ನಗರಗಳನ್ನು ನಿರ್ಮಿಸಿ ಜೀವನ ಆರಂಭಿಸಿದಂದಿನಿಂದ ನಾಗರಿಕತೆ ಆರಂಭವಾಯಿತೆಂದು ತಿಳಿಯಬಹುದು. ನಗರ ನಿರ್ಮಾಣ ನಾಗರಿಕತೆಯ ಆರಂಭವನ್ನು ಸೂಚಿಸುತ್ತದೆ. ನಿರ್ದಿಷ್ಟ ಭೂಪ್ರದೇಶದಲ್ಲಿ ನೆಲೆಸುವುದು, ನಗರಗಳ ನಿರ್ಮಾಣ, ವ್ಯವಸ್ಥಿತ ಹಾಗೂ ವಿಕಾಸಗೊಂಡ ಸರ್ಕಾರದ ವಿಧಾನ, ವಾಣಿಜ್ಯದ ಬೆಳವಣಿಗೆ, ಅನಿರ್ಬಂಧವಾದ ಪ್ರಗತಿಯನ್ನು ಸಾಧಿಸುವ ಶಕ್ತಿ, ಇವೆಲ್ಲವೂ ನಾಗರಿಕತೆಯನ್ನು ಸೂಚಿಸುತ್ತವೆ ಎನ್ನಲಾಗಿದೆ. ಮಾನವ ಬರೆವಣಿಗೆಯ ಕಲೆ ಮತ್ತು ಲೋಹಗಳ ಬಳಕೆಯನ್ನು ಕಂಡುಕೊಂಡಾಗ ನಾಗರಿಕತೆ ಆರಂಭವಾಯಿತೆಂದು ಹೇಳಲಾಗಿದೆ.

	ನಾಗರಿಕತೆ ಮಾನವನ ಭೌತಿಕ ಮತ್ತು ಬಾಹ್ಯಜೀವನಕ್ಕೆ ಸಂಬಂಧಪಟ್ಟಿದ್ದು, ಮಾನವನ ಜೀವನಕ್ಕೆ ಹೆಚ್ಚು ಸುಖ ಮತ್ತು ಅನುಕೂಲಗಳನ್ನು ನೀಡುವ ಎಲ್ಲ ಭೌತಿಕ ವಸ್ತುಗಳನ್ನು ಒಳಗೊಂಡಿರುವ ವಸ್ತುಸ್ಥಿತಿಯೇ ನಾಗರಿಕತೆ. ಸುಂದರ ವಸ್ತುಗಳ ನಿರ್ಮಾಣ, ಸ್ವತಂತ್ರ ವಿಚಾರಧಾರೆ, ಹೊಸದರ ಬಗ್ಗೆ ವಿಚಾರ ಮಾಡುವುದು, ಒಟ್ಟಿನ ಜೀವನ ನಡೆಸಲು ಶಾಸನಗಳನ್ನು ಮಾಡುವುದು-ಇವೇ ನಾಗರಿಕತೆ ಎಂಬುದಾಗಿ ಸಿ. ಇ. ಎಂ. ಜೋಡ್ ಹೇಳುತ್ತಾರೆ. ಜೀವನದ ಸ್ಥಿತಿಗತಿಗಳನ್ನು ನಿಯಂತ್ರಿಸಲು ಮಾನವ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ರೂಪುಗೊಂಡ ಸಮಗ್ರ ರಚನೆ ಮತ್ತು ಸಂಘಟನೆಯನ್ನು ನಾಗರಿಕತೆ ಎಂದು ಮೆಕೈವರ್ ಮತ್ತು ಪೇಜ್ ಕರೆಯುತ್ತಾರೆ. ಅರ್ನಾಲ್ಡ್ ಟಾಯ್‍ನ್‍ಬಿಯ ಪ್ರಕಾರ ರಾಜ್ಯ ಅಥವಾ ರಾಷ್ಟ್ರಕ್ಕಿಂತ ವಿಸ್ತಾರವಾದ ಕ್ಷೇತ್ರದ ಮೇಲೆ ತನ್ನ ಪ್ರಭುತ್ವವನ್ನು ಎತ್ತಿ ಹಿಡಿಯುವ ಧಾರ್ಮಿಕ ಮತ್ತು ನೈತಿಕ ಪದ್ಧತಿಯೆ ನಾಗರಿಕತೆ. 
	ನಾಗರಿಕತೆ ಎಂಬುದು ಪ್ರಗತಿ ಪಡೆದ ಸಾಮಾಜಿಕ ಜೀವನ. ಪ್ರಗತಿಪರ ಸಾಮಾಜಿಕ ಜೀವನವನ್ನು ಕಾಣುವುದು ಸಾಮಾನ್ಯವಾಗಿ ನಗರಗಳಲ್ಲಿ ಮಾತ್ರ. ಸಮಾಜ ಮತ್ತು ನಾಗರಿಕತೆಗಳು ಅನನ್ಯವಾದವು. ನಾಗರಿಕತೆಯ ಪ್ರಗತಿಯೇ ಸಮಾಜದ ಪ್ರಗತಿ. ಅವ್ಯವಸ್ಥೆ ಮತ್ತು ಅಭದ್ರತೆಗಳು ಕೊನೆಗೊಂಡು ಮಾನವ ವ್ಯವಸ್ಥಿತ ಜೀವನ ಮತ್ತು ರಾಜಕೀಯ ಸಂಘಟನೆಯನ್ನು ಸಾಧಿಸಿದಾಗ ನಾಗರಿಕತೆ ಪ್ರಾರಂಭವಾಯಿತೆಂದು ಹೇಳಬಹುದು. ಮಾನವ ಕುಲದ ಹಿತ ಮತ್ತು ಉದ್ಧಾರಕ್ಕಾಗಿ ಪ್ರಕೃತಿಯ ಶಕ್ತಿಗಳನ್ನು ತನ್ನ ಉಚ್ಚಮಟ್ಟದ ಬುದ್ಧಿಶಕ್ತಿ ಮತ್ತು ಗ್ರಹಣಶಕ್ತಿಯಿಂದ ಮಾನವ ಜಯಿಸಲು ಪ್ರಯತ್ನಿಸಿದಾಗ ನಾಗರಿಕತೆ ಅನಿವಾರ್ಯವಾಯಿತು. ಕೆಲವೇ ಶ್ರೇಷ್ಠ ರಚನಾತ್ಮಕ ಮತ್ತು ಕಲ್ಪನಾಶಕ್ತಿಯುಳ್ಳ ವ್ಯಕ್ತಿಗಳು ಮೊದಲು ಅನುಷ್ಟಾನಕ್ಕೆ ತಂದು, ಉತ್ತಮ ಗುಣಲಕ್ಷಣಗಳ ಫಲವನ್ನು ಸಾಕಷ್ಟು ಮಾನವರು ಅನಂತರ ಒಪ್ಪಿ ಅನುಸರಿಸಿಕೊಂಡು ಬಂದು, ಅದೊಂದು ಸಾಮಾಜಿಕ ವಸ್ತುಸ್ಥಿತಿಯೆಂದು ಅಂಗೀಕರಿಸಿದ್ದು ನಾಗರಿಕತೆ.

	ಮಾನವನ ಭೌತಿಕ ಪ್ರಗತಿಯೇ ನಾಗರಿಕತೆ. ಅವ್ಯವಸ್ಥೆ ಅರಾಜಕತೆ ಇಲ್ಲದಾಗ ನಾಗರಿಕ ಜೀವನ ಸಾಧ್ಯ. ಪ್ರಕೃತಿಯ ಬಗ್ಗೆ ಅರಿವು, ಕಲಾಪ್ರಪಂಚದಲ್ಲಿ ಪ್ರಗತಿ, ನೈತಿಕ ಸಂಹಿತೆ, ಸುಭದ್ರ ಸರ್ಕಾರ ಮುಂತಾದವು ನಾಗರಿಕ ಸಮಾಜದ ಲಕ್ಷಣಗಳೆನಿಸಿವೆ. ಆದಿಕಾಲದಿಂದಲೂ ನಾಗರಿಕ ಸಮಾಜವನ್ನು ಕಟ್ಟಲು, ಪ್ರಕೃತಿಯ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುವಂಥ ಸಾಧನೆಗಳನ್ನು ಕಂಡುಹಿಡಿಯಲು ಮನುಷ್ಯ ನಡೆಸಿದ ಹೋರಾಟದ ಫಲವೇ ನಾಗರಿಕತೆ.

	ಸಂಸ್ಕøತಿ: ಮಾನವನ ಇತಿಹಾಸದಲ್ಲಿ ಹೆಚ್ಚು ಪ್ರಾಮುಖ್ಯ ಪಡೆದು, ಗಮನಾರ್ಹ ರೀತಿಯಲ್ಲಿ ಬಳಕೆಯಲ್ಲಿರುವ ಇನ್ನೊಂದು ಪದ ಸಂಸ್ಕøತಿ. ಮನುಷ್ಯನಿಗೆ ಮಾತ್ರ ಸಂಸ್ಕøತಿ ಇರಲು ಸಾಧ್ಯ. ಸಂಸ್ಕøತಿ ಎಂಬ ಪದಕ್ಕೆ ವಿಶಾಲವಾದ ಮತ್ತು ಅರ್ಥಗರ್ಭಿತವಾದ ವ್ಯಾಖ್ಯೆ ಉಂಟು. ಮಾನವಶಾಸ್ತ್ರಜ್ಞರು ಸಂಸ್ಕøತಿ ಎಂಬ ಪದವನ್ನು ವ್ಯಾಪಕವಾದ ಅರ್ಥದಲ್ಲಿ ಬಳಸಿದ್ದಾರೆ. ಅವರು ಅದನ್ನು ಭೌತ ಸಂಸ್ಕøತಿ ಅಥವಾ ನಾಗರಿಕತೆ ಮತ್ತು ಅಭೌತ ಸಂಸ್ಕøತಿ ಎಂದು ವಿಂಗಡಿಸಿದ್ದಾರೆ. ನಾಗರಿಕತೆ ಅವರ ಅಭಿಪ್ರಾಯದಲ್ಲಿ ಸಮಗ್ರ ಸಂಸ್ಕøತಿಯ ಒಂದು ಮೆಟ್ಟಿಲು ಅಥವಾ ಹಂತ ಮಾತ್ರ. ಸ್ಪೆಂಗ್ಲರ್ ಹೇಳುವಂತೆ, ಸಂಸ್ಕøತಿಯ ಕ್ಷೀಣಿಸುವ ಒಂದು ಘಟ್ಟ ನಾಗರಿಕತೆ. ಈ ಸ್ಥಿತಿಯಲ್ಲಿ ಸಂಸ್ಕøತಿ ತನ್ನ ಸೃಜನಾತ್ಮಕ ಶಕ್ತಿಯನ್ನು ಕಳೆದುಕೊಂಡು, ಕೇವಲ ಯಾಂತ್ರಿಕವೂ ಅನುಕರಣೀಯವೂ ಆಗುತ್ತದೆ. ವಾಸದ ಮನೆಗಳು, ರೇಡಿಯೋ, ಉಡುಗೆ-ತೊಡುಗೆಗಳು, ಪಾತ್ರೆ, ಉಪಕರಣಗಳು, ಗ್ರಂಥಗಳು ಮುಂತಾದ ವಾಸ್ತವಿಕ ವಸ್ತುಗಳನ್ನು ಒಳಗೊಂಡದ್ದು ಭೌತ ಸಂಸ್ಕøತಿ. ಮಾನವನ ಸೃಷ್ಟಿಯೆನಿಸಿದ ಭಾಷೆ, ಸಾಹಿತ್ಯ, ಕಲೆ, ಧರ್ಮ, ವಿಜ್ಞಾನ, ಶಾಸನ ಮುಂತಾದ ಭಾವನಾಪ್ರಧಾನ ವಸ್ತುಗಳಿಗೆ ಸಂಬಂಧಿಸಿದ್ದು ಅಭೌತ ಸಂಸ್ಕøತಿ.

	ಸಮಾಜದ ಅಳಿವು-ಉಳಿವುಗಳು ಹೆಚ್ಚಾಗಿ ಸಂಸ್ಕøತಿಯನ್ನು ಅವಲಂಬಿಸಿವೆ. ಮನುಷ್ಯನ ರೀತಿ-ನೀತಿಗಳು, ಸಾಮಾಜಿಕ ಪದ್ಧತಿ ಸಂಪ್ರದಾಯಗಳು, ಅವನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳು, ಇವೆಲ್ಲವನ್ನೂ ಒಳಗೊಂಡ ವ್ಯವಸ್ಥಿತ ಜೀವನ ಕ್ರಮವೇ ಸಂಸ್ಕøತಿ. ವಿಶಿಷ್ಟ ಸಮಾಜವೊಂದರ ಸದಸ್ಯರು ಪಾಲುಗೊಂಡ ವಂಶಪಾರಂಪರ್ಯವಾಗಿ ಸಾಗಿಸುವ ಜ್ಞಾನ, ಮನೋಭಾವಗಳು ಮತ್ತು ರೂಢಿಯಾದ ವರ್ತನಾರೂಪಿಕೆಗಳ ಒಟ್ಟು ಮೊತ್ತವೇ ಸಂಸ್ಕøತಿ ಎಂದು ರಾಲ್ಫ್ ಲಿಂಟನ್ ಹೇಳಿದ್ದಾರೆ. ಹೆನ್ರಿ ಲೂಕಾಸ್ ಹೇಳುವಂತೆ, ಸಾಮಾಜಿಕ, ರಾಜಕೀಯ, ಆರ್ಥಿಕ, ಬೌದ್ಧಿಕ, ಕಲಾ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಜನಸಮುದಾಯ ಸಾಧಿಸಿದ ಮಹತ್ತರ ಸಾಧನೆಗಳು ಸಂಸ್ಕøತಿ. ಜೀವನದಲ್ಲಿ ಕಾಣಬಹುದಾದ ಸತ್ಯ, ಸೌಂದರ್ಯ, ಸೌಜನ್ಯಗಳನ್ನು ಗುರುತಿಸಿ ಅವನ್ನು ಮೆಚ್ಚಿಕೊಳ್ಳುವ ಪರಿಶುದ್ಧ ಮಾನಸಿಕ ಮತ್ತು ಬೌದ್ಧಿಕ ಸ್ಥಿತಿಯನ್ನು ಸಂಸ್ಕøತಿಯೆನ್ನಬಹುದು. ವ್ಯಕ್ತಿಯೊಬ್ಬನನ್ನು ಸಭ್ಯನನ್ನಾಗಿ, ಸಂಭಾವಿತನನ್ನಾಗಿ ಮಾಡುವ ಎಲ್ಲ ಸದ್ಗುಣಗಳ ಸಮುದಾಯ ಸಂಸ್ಕøತಿ, ಮಾನವ ಸಮಾಜದ ಸದಸ್ಯನಾಗಿ ಅರ್ಜಿಸಿದ ಜ್ಞಾನ, ನಂಬಿಕೆ, ಕಲೆ, ನೈತಿಕ ನಿಯಮಗಳು, ಕಾನೂನು, ಸಂಪ್ರದಾಯ ಮತ್ತು ಇನ್ನಾವುದೇ ಸಾಮಥ್ರ್ಯಗಳನ್ನು ಒಳಗೊಂಡ ಅಖಂಡವಾದ ಸಂಕೀರ್ಣ ವ್ಯವಸ್ಥೆ ಸಂಸ್ಕøತಿ ಎಂಬುದಾಗಿ ಇ. ಬಿ. ಟೈಲರ್ ಹೇಳುತ್ತಾರೆ. ಸಂಸ್ಕøತಿ ಇಲ್ಲದಿದ್ದರೆ ಜೀವನ ಬರಡು ಮತ್ತು ನಿರರ್ಥಕವೆನಿಸುತ್ತದೆ. ಆದ್ದರಿಂದಲೆ ಶತ ಶತಮಾನಗಳಿಂದಲೂ ಪ್ರತಿಯೊಂದು ಸಮಾಜ, ರಾಷ್ಟ್ರ ತನ್ನದೇ ಆದ ಸಂಸ್ಕøತಿ ಮತ್ತು ಜೀವನಕ್ರಮವನ್ನು ರೂಪಿಸಿಕೊಂಡು ಬಂದಿದೆ. ಈಜಿಪ್ಟಿನವರು, ಸುಮೇರಿಯನರು, ಭಾರತೀಯರು, ಚೀನೀಯರು, ಜಪಾನೀಯರು, ಪರ್ಷಿಯನರು, ಗ್ರೀಕರು, ರೋಮನರು, ಬ್ರಿಟಿಷರು, ಫ್ರೆಂಚರು ಎಲ್ಲರೂ ತಮ್ಮ ಸಂಸ್ಕøತಿಯನ್ನು ಬೆಳೆಸಿ, ಪೋಷಿಸಿಕೊಂಡು ಬಂದಿದ್ದಾರೆ.

	ವ್ಯತ್ಯಾಸಗಳು: ನಾಗರಿಕತೆ ಮತ್ತು ಸಂಸ್ಕøತಿಗಳು ಹೊರನೋಟಕ್ಕೆ ಬೇರೆ ಎನಿಸದಿದ್ದರೂ ಇವೆರಡರ ನಡುವೆ ವ್ಯತ್ಯಾಸಗಳನ್ನು ಕಾಣಬಹುದು. ನಾಗರಿಕತೆ ಸಂಚಿತ ಸ್ವರೂಪವುಳ್ಳದ್ದು. ಅದು ನಿರಂತರವಾಗಿ ಬೆಳೆಯುತ್ತಲೇ ಇರುತ್ತದೆ. ಪ್ರತಿಯೊಂದು ತಲೆಮಾರಿನ ಜನಾಂಗವೂ ಜ್ಞಾನವನ್ನು ರಕ್ಷಿಸಿಡುವುದರ ಜೊತೆಗೆ ತನ್ನದೇ ಆದ ಪ್ರಮುಖ ಹಾಗೂ ವಿಶಿಷ್ಟ ಕೊಡುಗೆಯನ್ನು ನೀಡಿ ನಾಗರಿಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ; ನಾಗರಿಕತೆಯ ಸಾಧನ ಸಲಕರಣೆಗಳಲ್ಲಿ ಸುಧಾರಣೆ ಮಾಡುವುದರ ಜೊತೆಗೆ ಹೆಚ್ಚಳವನ್ನು ಸಾಧಿಸುತ್ತದೆ. ಪ್ರತಿಯೊಂದು ಹೊಸ ಪ್ರಯೋಗವೂ ಒಂದು ವಸ್ತುವಿನ ಕಾರ್ಯಸಾಮಥ್ರ್ಯ ಮತ್ತು ಉಪಯೋಗವನ್ನು ಹೆಚ್ಚಿಸುವುದಕ್ಕೆ ಸಹಾಯಕವಾಗುತ್ತದೆ. ಬ್ಯಾಂಕಿಂಗ್ ಪದ್ಧತಿ ಹೆಚ್ಚು ಹೆಚ್ಚು ಪ್ರಯೋಗ ಮತ್ತು ಅನುಭವಗಳಿಂದ ಪರಿಪೂರ್ಣತೆ ಪಡೆಯುವ ಸಾಧ್ಯತೆ ಉಂಟು. ಹಿಂದಿನ ಮಣ್ಣಿನ ಹಣತೆಗಳಿಗಿಂತ ಇಂದಿನ ವಿದ್ಯುಚ್ಫಕ್ತಿ ದೀಪಗಳು ಅಪಾರ ಸುಧಾರಣೆಯ ಸೂಚಕಗಳಾಗಿವೆ. ಅದೇ ರೀತಿ ಇಂದಿನ ಸಾರಿಗೆ ಸಾಧನಗಳಾದ ರೈಲು, ಹಡಗು, ವಿಮಾನಗಳ ವೇಗ, ಸಾಮಥ್ರ್ಯ ಮತ್ತು ವಿನ್ಯಾಸಗಳಲ್ಲಿ ತ್ವರಿತ ಬದಲಾವಣೆಗಳಾಗುತ್ತಿರುವುದನ್ನು ಕಾಣಬಹುದು. ಆದ್ದರಿಂದಲೇ ನಾಗರಿಕತೆಯನ್ನು ಪ್ರಗತಿಯ ಸೂಚನೆ ಅಥವಾ ಮುನ್ನಡೆ ಎಂದು ಕರೆಯಲಾಗಿದೆ.

	ಸಂಸ್ಕøತಿ ಕೂಡುತ್ತ ಹೋಗುವಂಥದಲ್ಲ. ಸಂಸ್ಕøತಿ ಯಾವಾಗಲೂ ಮುನ್ನಡೆಯುತ್ತಲೇ ಇರುತ್ತದೆಂದು ಹೇಳಲು ಬರುವುದಿಲ್ಲ. ಅದು ಮಂದಗತಿಯಲ್ಲಿ ಮುಂದುವರಿಯಬಹುದು ಅಥವಾ ಅನೇಕ ವೇಳೆ ಇಳಿಮುಖವಾಗಲೂಬಹುದು. ಸಾಹಿತ್ಯ, ಕಲೆ, ಸಂಗೀತ, ಧರ್ಮ ಮತ್ತು ನೈತಿಕ ಕ್ಷೇತ್ರಗಳಲ್ಲಿ ಒಂದು ಕಾಲದಲ್ಲಿ ಆದ ಉತ್ಕøಷ್ಟ ಸಾಧನೆಗಳು ಮತ್ತೆ ಅಸಾಧ್ಯವಾಗಬಹುದು. ವ್ಯಾಸ, ವಾಲ್ಮೀಕಿ, ಶೇಕ್ಸ್‍ಪಿಯರ್, ಮಿಲ್ಟನ್ ಮುಂತಾದ ಸೃಷ್ಟ್ಯಾತ್ಮಕ ಲೇಖಕರ ಗ್ರಂಥಗಳಲ್ಲಿ ಕಂಡುಬರುವ ಅಸಾಮಾನ್ಯ ಗುಣಲಕ್ಷಣಗಳನ್ನು ಇತರರ ಗ್ರಂಥಗಳಲ್ಲಿ ಕಾಣದೆ ಹೋಗಬಹುದು. ಅಜಂತ ಮತ್ತು ಎಲ್ಲೋರದ ಚಿತ್ರಗಳು ಅಸಾಧಾರಣ ಪ್ರತಿಭೆಯಿಂದ ಕೂಡಿದವು. ಮೈಕೆಲ್ಯಾಂಜೆಲೋ, ಲೀಯೊನಾರ್ಡೋ ದ ವಿಂಚಿ ಮುಂತಾದ ಪ್ರತಿಭಾವಂತರ ಕಲಾಕೃತಿಗಳನ್ನು ಮೀರಿಸುವಂಥವು ಬಂದಿವೆಯೇ ಎಂದು ಯೋಚಿಸಬೇಕಾಗಬಹುದು. ಸಂಸ್ಕøತಿ ಸಂಚಿತವಾಗುವುದಲ್ಲವೆನ್ನಲು ಇವು ನಿದರ್ಶನಗಳು. ಸಂಸ್ಕøತಿಯನ್ನು ಪ್ರತಿಯೊಂದು ಬಾರಿಯೂ ಹೊಸದಾಗಿ ಗಳಿಸಬೇಕಾಗುತ್ತದೆ.

	ನಾಗರಿಕತೆಯ ಸಾಧನಗಳ ಕಾರ್ಯಶಕ್ತಿಯನ್ನು, ಉಪಯೋಗವನ್ನು ನಿಖರವಾಗಿ ಅಳೆಯಬಹುದು. ನಾಗರಿಕತೆಯ ಸಂಕೇತಗಳೆನಿಸಿದ ಅನೇಕ ಪ್ರಯೋಜನಕಾರಿ ವಸ್ತುಗಳನ್ನೂ ಅವುಗಳ ಪರಿಣಾಮಗಳನ್ನೂ ಹೋಲಿಸಿ ನೋಡುವಾಗ ಉತ್ತಮ ದರ್ಜೆಯದು ಯಾವುದು, ಕೆಳಮಟ್ಟದ್ದು ಯಾವುದು ಎಂಬುದನ್ನು ತಿಳಿಯಬಹುದು. ಆಧುನಿಕ ನಾಗರಿಕತೆಯ ಸಾಧನಗಳೆನಿಸಿದ ಮೋಟಾರು, ವಿದ್ಯುಚ್ಚಾಲಿತ ಮಗ್ಗ, ಲಾರಿ, ಉಗಿಬಂಡಿ, ವಿಮಾನ, ಟ್ರ್ಯಾಕ್ಟರ್ ಮುಂತಾದವು ಪರಂಪರಾನುಗತವಾಗಿ ಬಂದ ಸಾಧನಗಳ ಕಾರ್ಯಶಕ್ತಿಗಿಂತ ಹೆಚ್ಚಿನವು. ಎತ್ತಿನ ಗಾಡಿಗಿಂತ ಲಾರಿ ವೇಗವಾಗಿ ಚಲಿಸುತ್ತದೆ. ಲಾರಿಗಿಂತಲೂ ವಿಮಾನ ಹೆಚ್ಚು ವೇಗದಲ್ಲಿ ಚಲಿಸುತ್ತದೆ. ನೇಗಿಲಿಗಿಂತ ಟ್ರ್ಯಾಕ್ಟರ್ ಹೆಚ್ಚು ಉತ್ತಮ ಮತ್ತು ಅನುಕೂಲವಾದ್ದು. ಕೈಮಗ್ಗಕ್ಕಿಂತ ವಿದ್ಯುಚ್ಚಾಲಿತ ಮಗ್ಗದಿಂದ ಅಧಿಕ ಉತ್ಪಾದನೆ ಸಾಧ್ಯ. ಹಿಂದಿನ ಅದಲು ಬದಲು ಪದ್ಧತಿಗಿಂತ ಆಧುನಿಕ ಯುಗದ ಹಣ ಚಲಾವಣೆ ಪದ್ಧತಿ ಉತ್ತಮವಾದುದು ಎನ್ನಬಹುದು.

	ಆದರೆ ಸಂಸ್ಕøತಿಯ ಸಾಧನಗಳು ಮತ್ತು ವಿಷಯಗಳ ಮೌಲ್ಯವನ್ನು ಹಾಗೂ ಪ್ರಯೋಜನವನ್ನು ಅಳೆಯಲು ನಿಖರವಾದ ಯಾವ ಮಾನದಂಡವೂ ಇಲ್ಲ. ಅಭಿರುಚಿಯ ಬಗ್ಗೆ ಇದೇ ಸರಿ ಎಂದು ಹೇಳಲು ಬರುವುದಿಲ್ಲ. ಪಿಕಾಸೋನ ಚಿತ್ರಗಳು ಕೆಲವರಿಗೆ ಶ್ರೇಷ್ಠ ಕಲಾಕೃತಿಗಳೆನಿಸಿದರೆ, ಕೆಲವರಿಗೆ ಅಸಹ್ಯವೆನಿಸಬಹುದು. ಕೆಲವರಿಗೆ ಕಾಳಿದಾಸನ ನಾಟಕಗಳು ಮೆಚ್ಚಿಗೆಯಾದರೆ ಮತ್ತೆ ಕೆಲವರಿಗೆ ಭಾಸನ ನಾಟಕಗಳು ಇಷ್ಟವಾಗಬಹುದು. ಕೆಲವರಿಗೆ ಜನಪದ ಗೀತೆಗಳು ಹೆಚ್ಚು ಸಂತೋಷ ನೀಡಿದರೆ ಮತ್ತೆ ಕೆಲವರಿಗೆ ಕರ್ಣಾಟಕ ಶಾಸ್ತ್ರೀಯ ಸಂಗೀತ ಪ್ರಿಯವೆನಿಸಬಹುದು. ಈ ವಿಚಾರದಲ್ಲಿ ಸರ್ವಸಮ್ಮತವಾದ ಉತ್ತರ ದೊರೆಯುವುದು ಕಷ್ಟ.

	ನಾಗರಿಕತೆಯ ಸಾಧನಗಳನ್ನು ಒಂದು ನಾಡಿನಿಂದ ಸುಲಭವಾಗಿ ಮತ್ತು ತೀವ್ರಗತಿಯಲ್ಲಿ ಎರವಲು ಪಡೆಯಬಹುದು ಮತ್ತು ಇನ್ನೊಂದು ನಾಡಿಗೆ ಸಾಗಿಸಲೂಬಹುದು. ಪ್ರಗತಿಪರ ರಾಷ್ಟ್ರಗಳು ನಿರ್ಮಿಸಿದ ಆಧುನಿಕ ನಾಗರಿಕತೆಯ ಸಾಧನ ಸಲಕರಣೆಗಳನ್ನು ಹಿಂದುಳಿದ ರಾಷ್ಟ್ರಗಳು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಆಧುನಿಕ ನಾಗರಿಕತೆಯ ಫಲಗಳೆನಿಸಿದ ರೇಡಿಯೊ, ದೂರದರ್ಶನ, ದೂರವಾಣಿ, ಗಡಿಯಾರ, ಕಾರು ಮುಂತಾದವು ಯಾವ ಒಂದು ನಾಡಿನ ಸ್ವಾಮ್ಯವಾಗಿ ಉಳಿದಿಲ್ಲ. ಈ ವಸ್ತುಗಳ ಬಳಕೆಯನ್ನು ಪ್ರಪಂಚಾದ್ಯಂತ ಕಾಣಬಹುದು. ಯೋಗ್ಯ ಶಿಕ್ಷಣ ಮತ್ತು ಉತ್ತಮ ತರಬೇತಿಯಿಂದ ಎಂಥ ಜಟಿಲ ಯಂತ್ರವನ್ನಾದರೂ ಉಪಯೋಗಿಸುವ ವಿಧಾನವನ್ನು ಅರಿಯಬಹುದು. ಗೃಹಕೈಗಾರಿಕೆಗಳ ಬದಲು ಬೃಹತ್ ಕೈಗಾರಿಕೆಗಳು ಬೆಳೆದಿವೆ. ಭವ್ಯ ಸಾಧನಗಳನ್ನು, ಹೆದ್ದಾರಿಗಳನ್ನು ನಿರ್ಮಿಸುವ ಹೊಸ ಹೊಸ ವಿಧಾನಗಳನ್ನು ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಕಾಣಬಹುದು.

	ಆದರೆ ಇಷ್ಟು ಸುಲಭವಾಗಿ, ಸರಳವಾಗಿ ಸಂಸ್ಕøತಿಯ ಸಾಧನಗಳನ್ನು ಅಳವಡಿಸಿಕೊಳ್ಳುವುದು ಅಸಾಧ್ಯ. ಎಂದರೆ ಸಂಸ್ಕøತಿಯ ಹರಿವು ನಾಡಿನಿಂದ ನಾಡಿಗೆ ಸಾಧ್ಯವಿಲ್ಲವೆಂದಲ್ಲ. ಆದರೆ ಅದು ಸಾವಕಾಶವಾಗಿ ಹಂತಹಂತವಾಗಿ ಸಾಗುತ್ತದೆ. ಏಕೆಂದರೆ ಯಾವುದೇ ಸಂಸ್ಕøತಿಯಲ್ಲಾದರೂ ಅವರದೇ ಆದ ವಾಸ್ತವಿಕ ಮೌಲ್ಯಗಳನ್ನು ಅಥವಾ ಅಂತಃಸತ್ತ್ವ ಇರುತ್ತದೆ. ಆ ಅಮೂಲ್ಯ ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳಲು ತುಂಬ ಕಷ್ಟವಾಗುತ್ತದೆ. ಅದಕ್ಕೆ ಸಂಸ್ಕಾರದ ನೆರವು ಅಗತ್ಯ. ಪಾಶ್ಚಾತ್ಯರ ನಾಗರಿಕತೆಯನ್ನು ಪೌರಸ್ತ್ಯರು ಅನುಕರಿಸಬಹುದೇ ಹೊರತು ಅವರ ಸಂಸ್ಕøತಿಯನ್ನಲ್ಲ. ಪಾಶ್ಚಾತ್ಯ ಸಂಸ್ಕøತಿಯನ್ನು ನಿಧಾನವಾಗಿ ಸಮೀಕರಿಸಿಕೊಳ್ಳಬಹುದು. ಆದರೆ ಅದರಿಂದ ಹಳೆಯ ಸಂಸ್ಕøತಿಯ ಸಂಪೂರ್ಣ ಸ್ಥಾನಪಲ್ಲಟ ಸಾಧ್ಯವಿಲ್ಲ. ಏಕೆಂದರೆ ಸಂಸ್ಕøತಿ ಒಂದು ಜನಾಂಗದ ಅಸಾಧಾರಣ ಗುಣಲಕ್ಷಣಗಳನ್ನು ನೇರವಾಗಿ ಅಭಿವ್ಯಕ್ತಗೊಳಿಸುತ್ತದೆ. ಒಂದು ಸಂಸ್ಕøತಿ ಇನ್ನೊಂದು ಸಂಸ್ಕøತಿಯ ಪ್ರಭಾವದಿಂದಾಗಿ ಸ್ವಲ್ಪ ಬದಲಾಗುವುದು ಸಾಧ್ಯ. ಅಲ್ಲದೆ ಸಂಸ್ಕøತಿಯ ಸಾಧನಗಳು ಸಮಾನಧರ್ಮದ ಅಥವಾ ಸಮಾನಾಭಿರುಚಿಯ ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಕಲಾವಿದನ ಮನೋಧರ್ಮ ಮತ್ತು ಗುಣಗಳಿಲ್ಲದವನು ಕಲೆಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸುವುದಾಗಲಿ ಶಾಸ್ತ್ರೀಯ ಸಂಗೀತದ ಬಗ್ಗೆ ತಿಳುವಳಿಕೆ ಇಲ್ಲದವನು ಅದರಲ್ಲಿ ಅಭಿರುಚಿ ಬೆಳೆಸಿಕೊಳ್ಳುವುದಾಗಲಿ ಸಾಧ್ಯವಾಗದು. ಮಿಲ್ಟನ್ ಅಥವಾ ರವೀಂದ್ರನಾಥ ಠಾಕೂರರ ಸಾಹಿತ್ಯ ಮೌಲ್ಯಗಳ ಬಗ್ಗೆ ಸಾಮಾನ್ಯ ವ್ಯಕ್ತಿ ಏನೂ ಹೇಳಲಾರ. ಆದ್ದರಿಂದಲೇ ಆರ್ನಾಲ್ಡ್ ಟಾಯ್‍ನ್‍ಬಿ ಹೇಳುವಂತೆ, ಪಾಶ್ಚಾತ್ಯ ತಂತ್ರವಿದ್ಯೆಯನ್ನು ಅಥವಾ ವಿಧಾನವನ್ನು ರಫ್ತು ಮಾಡುವುದು ಪ್ರಪಂಚದಲ್ಲಿ ವ್ಯಾಪಾರ ದೃಷ್ಟಿಯಿಂದ ಸುಲಭ. ಆದರೆ ಒಬ್ಬ ಪಾಶ್ಚಾತ್ಯ ಕವಿ ಅಥವಾ ಸಂತನಿಗೆ ಪಾಶ್ಚಾತ್ಯನಲ್ಲದವನ ಆತ್ಮದಲ್ಲಿ ತನ್ನಲ್ಲಿನ ಆಧ್ಯಾತ್ಮಿಕ ಜ್ಯೋತಿಯನ್ನು ಪ್ರಜ್ವಲಿಸುವಂತೆ ಮಾಡುವುದು ಅತ್ಯಂತ ಕಠಿಣವಾದ ಕೆಲಸ. ಪಾಶ್ಚಾತ್ಯ ರಾಷ್ಟ್ರಗಳು ಪೌರಾಸ್ತ್ಯರ ಪುರಾತನ ಸಂಸ್ಕøತಿಯ ಸಾಧನಗಳನ್ನು ಸುಲಭವಾಗಿ ತಮ್ಮವನ್ನಾಗಿ ಮಾಡಿಕೊಳ್ಳಲಾರವು. ಅದೇ ರೀತಿ ಪಾಶ್ಚಾತ್ಯ ಸಂಸ್ಕøತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪೌರಸ್ತ್ಯರಿಗೂ ಅಷ್ಟೇ ಕಠಿಣವೆನಿಸುತ್ತದೆ.

	ನಾಗರಿಕತೆ ಬಾಹ್ಯಪ್ರಧಾನವಾದ್ದು ಮತ್ತು ಭೌತಿಕ ಸಂಪತ್ತಿನಿಂದ ಕೂಡಿದ್ದು, ಆದರೆ ಸಂಸ್ಕøತಿ ಅಂತರಂಗಕ್ಕೆ ಸೇರಿದ್ದು. ನಾಗರಿಕತೆ ಭೌತಿಕ ಸಂಪತ್ತಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಬಾಹ್ಯ ಜೀವನಕ್ಕೆ ಬೇಕಾದ ಹಲವಾರು ಬೇಡಿಕೆಗಳನ್ನು ಪೂರೈಸಿಕೊಳ್ಳಲು ರಾಷ್ಟ್ರ, ಮನೆ, ವಿದ್ಯಾಲಯ, ಬ್ಯಾಂಕುಗಳು, ಕಾರ್ಖಾನೆಗಳು, ಚಿತ್ರಮಂದಿರ ಮೊದಲಾದವನ್ನು ಮಾನವ ನಿರ್ಮಿಸಿಕೊಂಡ. ವ್ಯಾಪಾರ, ವ್ಯವಹಾರ, ಶಾಸನಗಳು, ಸಂಚಾರ ಮತ್ತು ಸಮಾಚಾರದ ಸಾಧನಗಳನ್ನು ಮಾಡಿಕೊಂಡ. ಈ ಸಾಧನ ಸಲಕರಣೆಗಳೆಲ್ಲವೂ ಮಾನವನ ಬಾಹ್ಯ ಜೀವನಕ್ಕೆ ಮತ್ತು ಭೌತಿಕ ಪ್ರಗತಿಗೆ ಸಂಬಂಧಿಸಿದ್ದು. ನಾಗರಿಕತೆಯಿಂದ ಭೌತಿಕ ಜೀವನದ ಭೋಗಭಾಗ್ಯಗಳೆಲ್ಲವನ್ನೂ ಪಡೆಯಬಹುದು. ನಾಗರಿಕತೆಯ ಸಾಧನಗಳು ಸಾರ್ವತ್ರಿಕಗಳೆನಿಸಿ ಮಾನವನನ್ನು ಪ್ರಪಂಚದ ಸುಖದೆಡೆ ಸೆಳೆಯುತ್ತದೆ.

	ಸಂಸ್ಕøತಿ ಇದಕ್ಕೆ ವಿರುದ್ದವಾದದ್ದು. ಅದು ಮಾನವನ ಅಂತರಂಗ ಜೀವನಕ್ಕೆ ಸಂಬಂಧಿಸಿದ್ದು. ಅದು ಆತ್ಮಸಂಪತ್ತು ಮತ್ತು ಸಂತೋಷಕ್ಕೆ ಹೆಚ್ಚು ಆದ್ಯತೆ ನೀಡುವುದು. ಮನುಷ್ಯನ ಅಂತರಂಗದ ಭಾವನೆಗಳು, ಯೋಚನೆಗಳು, ಧ್ಯೇಯ ಮತ್ತು ನೈತಿಕ ಮೌಲ್ಯಗಳನ್ನು ಹೆಚ್ಚು ಪ್ರಧಾನವಾಗುಳ್ಳದ್ದು. ಧರ್ಮ, ನೀತಿ, ಕಲೆ, ನಂಬಿಕೆ ಇವೆಲ್ಲವೂ ಮಾನವನ ಅಂತರಂಗಕ್ಕೆ ಸಂಬಂಧಿಸಿದವು. ವ್ಯಕ್ತಿಯ ಕ್ರಿಯೆಗಳಲ್ಲಿ, ಆಚಾರ-ವಿಚಾರಗಳಲ್ಲಿ, ಧರ್ಮ ಸಾಹಿತ್ಯ ಕಲೆಗಳಲ್ಲಿ ಅಭಿವ್ಯಕ್ತಗೊಳ್ಳುವ ಮಾನವ ಸ್ವಭಾವವೇ ಸಂಸ್ಕøತಿ. ಸಂಸ್ಕøತಿ ನಮ್ಮಲ್ಲಿ ಸಭ್ಯತೆ, ಯೋಗ್ಯ ನಡವಳಿಕೆ, ವಿನಯ, ಸೌಜನ್ಯ, ಸರಳತೆ, ಋಜುಮಾರ್ಗ ಮುಂತಾದ ಸದ್ಗುಣಗಳನ್ನು ಮೂಡಿಸುವಂಥದು. ಸುಸಂಸ್ಕøತ ವ್ಯಕ್ತಿ ಸರಳ ಉದಾತ್ತ ನೀತಿಯವನೂ ಸಂಯಮಿಯೂ ಆಗಿದ್ದು, ಸಂತೃಪ್ತ ಜೀವನ ನಡೆಸುವವನು. ಜೀವನದಲ್ಲಿ ಪರಿಪೂರ್ಣ ಸಂತೋಷವನ್ನು ಪಡೆಯುವ ಸಾಹಸದ ಫಲವೇ ಸಂಸ್ಕøತಿ. ಪರಿಪೂರ್ಣತೆಯ ಬಯಕೆಯೇ ಸಂಸ್ಕøತಿಯ ಉಗಮಸ್ಥಾನ ಎಂದು ವ್ಯಾತ್ಯೂ ಆರ್ನಾಲ್ಡ್ ಹೇಳಿದ್ದಾನೆ. ವೈಜ್ಞಾನಿಕ ಕುತೂಹಲ ಸಂಸ್ಕøತಿಯ ಮೂಲವಲ್ಲ. ಪರಿಪೂರ್ಣತೆಯ ಪ್ರೇಮ ಮತ್ತು ಅಧ್ಯಯನ-ಇವು ಸಂಸ್ಕøತಿಯ ಮೂಲ ಸಾಮಗ್ರಿ, ಎಂದು ಆತನ ಅಭಿಪ್ರಾಯ. ಹೃದಯದ ಪರಿಪಕ್ವತೆಗೆ ಪರಿಪೂರ್ಣತೆಯ ಅಧ್ಯಯನ ನೆರವಾದಾಗ ಅದು ಸಂಸ್ಕøತಿಯೆನಿಸುತ್ತದೆ. ವ್ಯಕ್ತಿ ವಿಕಾಸವೇ ಸಂಸ್ಕøತಿ. ಸಂಸ್ಕøತಿ ಬಾಳನ್ನು ಹದಗೊಳಿಸುತ್ತದೆ; ಆತ್ಮಶಿಕ್ಷಣ ಮತ್ತು ನಿಗ್ರಹಕ್ಕೆ ಅನುಕೂಲ ಮಾಡಿಕೊಡುತ್ತದೆ. ಸಂಸ್ಕøತಿ ಜನಾಂಗದ ಅಂತರಾತ್ಮವನ್ನು ಪ್ರತಿಬಿಂಬಿಸುತ್ತದೆ. ಆತ್ಮಸಂಪತ್ತಿನ ಪ್ರಗತಿಗಾಗಿ ಶ್ರಮಿಸುತ್ತದೆ. ನಮ್ಮ ನೈಜ ಸ್ವಭಾವವೇ ಸಂಸ್ಕøತಿ ಮತ್ತು ಲೌಕಿಕ ಸಂಪತ್ತೇ ನಾಗರಿಕತೆ ಎಂದು ಮೆಕೈವರ್ ಮತ್ತು ಚಾಲ್ರ್ಸ್ ಎಚ್. ಪೇಜ್ ಹೇಳಿದ್ದಾರೆ. ನಾಗರಿಕತೆಗೂ ಸಂಸ್ಕøತಿಗೂ ಇರುವ ಭೇದಗಳು ಸಾಧನಗಳಿಗೂ ಗುರಿಗಳಿಗೂ ಇರುವ ವ್ಯತ್ಯಾಸದ ಒಂದು ಬಗೆ ಎಂದು ಅವರ ಅಭಿಪ್ರಾಯ.

	ನಾಗರಿಕತೆ ಮತ್ತು ಸಂಸ್ಕøತಿಗಳು ಬೇರೆ ಬೇರೆ ಎನಿಸಿದರೂ, ಅವುಗಳ ನಡುವೆ ಹಲವು ವ್ಯತ್ಯಾಸಗಳಿದ್ದರೂ, ಅವೆರಡೂ ಜೊತೆಯಾಗಿವೆ. ನಾಗರಿಕತೆ ಮತ್ತು ಸಂಸ್ಕøತಿಗಳು ಪರಸ್ಪರಾವಲಂಬಿಗಳು ಮತ್ತು ಪರಸ್ಪರ ಪರಿಣಾಮ ಬೀರುವಂಥವು. ನಾಗರಿಕತೆ ಸಾಧನವಾದರೆ, ಸಂಸ್ಕøತಿ ಗುರಿಯೆನಿಸುವುದು. ನಾಗರಿಕತೆಗೆ ಸಂಸ್ಕøತಿಯ ಮಾರ್ಗದರ್ಶನ ಅತ್ಯಗತ್ಯವೆನಿಸಿದೆ. ಇಂದಿನ ಯುದ್ಧತಪ್ತ ಜಗತ್ತು ಜಟಿಲ ಹಾಗೂ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಲದಲ್ಲಿ ಸಂಸ್ಕøತಿ ಮಹತ್ತ್ವಪೂರ್ಣ ಪಾತ್ರವಹಿಸಬೇಕಾಗಿದೆ. ನಾಗರಿಕತೆ ಮತ್ತು ಸಂಸ್ಕøತಿಗಳ ನಡುವಣ ಸಂಬಂಧ ಹೆಚ್ಚಿದಷ್ಟೂ ಅನ್ಯೋನ್ಯವಾದಷ್ಟೂ ವಿಶ್ವಶಾಂತಿ ಹೆಚ್ಚು ಹತ್ತಿರವಾಗುತ್ತದೆ; ಮಾನವ ನೆಮ್ಮದಿಯ ಬಾಳ್ವೆ ನಡೆಸಲು ಸಾಧ್ಯವಾಗುತ್ತದೆ.				
(ಜಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ